ಶ್ರೀ ಶ್ರೀಧರ ಸ್ವಾಮಿಗಳವರ ವಿಸ್ಮೃತಿ ಪ್ರವಚನದಿಂದ

(ಸೌಜನ್ಯ – Mrs Vani Akka Shastri of Gurupura, Kansur, Sirsi, Karnataka)

 
ಪರಮಾತ್ಮನು ಸರ್ವಸಮೃದ್ದನು. ಸರ್ವಸಮರ್ಥನು. ಅವನು ಯಾವುದನ್ನಾದರು ಮಾಡಬಹುದು. ಯಾವುದನ್ನಾದರು ಕೊಡಬಹುದು. ಈ ಮಾತು ಗೊತ್ತಿಲ್ಲದ ಜನ ವಿರಳ. ಆದರೆ ಅದನ್ನು ಆಚರಣೆಯಲ್ಲಿ ತರಬಲ್ಲವರು ಬಹಳ ವಿರಳರಾಗಿದ್ದಾರೆ. ಪರಮಾತ್ಮನು *ಸರ್ವಶಕ್ತಿ ಮಾನ್ ವಿಭು* ಎಂಬುದನ್ನು ತಿಳಿದ ಮಾತ್ರಕ್ಕೆ ಒಪ್ಪಿದ ಮಾತ್ರಕ್ಕೆ ಪ್ರಯೋಜನವಾಗದು. ಆ ಪರಮಾತ್ಮನು ಬಲುಜಾಣನಾದ ಸಾಹುಕಾರನಂತಿದ್ದಾನೆ. ತನ್ನ ಗಂಟು ಸೂರೆಗೊಳ್ಳಲು ಬರುವ ಕಳ್ಳರ ವಂಚಕ ನಡತೆಗೆ ಅವನು ಎಂದೂ ಮೋಸಹೋಗುವುದಿಲ್ಲ.
ಹೊರಗಿನವರನ್ನು ವಂಚಿಸಬಹುದು. ಆದರೆ ಒಳಗೆ ಕುಳಿತು ಸರ್ವಸಾಕ್ಷಿಯಾದ ಪರಮಾತ್ಮನನ್ನು ವಂಚಿಸುವುದು ಯಾರಿಗೆ ತಾನೇ ಸಾಧ್ಯ? ಆತನು ಮೆಚ್ಚ ಬೇಕಾದರೆ ತ್ರಿಕರಣ ಶುದ್ಧಿ ಬೇಕು. ಅರಿಷಡ್ವರ್ಗ ವನ್ನು ಜಯಿಸಿದ ಮನಸ್ಸಿನ ಬಲದಿಂದ ಪರಿಷ್ಕೃತವಾದ ದೃಷ್ಟಿ ಯಿಂದ ನೋಡಿದರೆ ಅವನು ಕಾಣಿಸುತ್ತಾನೆ. ಪರಿಷ್ಕೃತ ಹೃದಯದಿಂದ ಪರಿಭಾವಿಸಿದರೆ ಅವನು ಭಕ್ತಾಧೀನ, ಕರುಣಾಳು, ಬೇಡಿದ್ದನ್ನು ಕೊಡುವ ದಯಾ ಸಾಗರ. ಶುದ್ದಚಿತ್ತ , ಅನನ್ಯತೆ, ಇವು ಇಲ್ಲದಿದ್ದರೆ ಅವನೂ ಇಲ್ಲ ಅವನ ಕೃಪೆಯೂ ಇಲ್ಲ. ವಿವೇಕ ದೃಷ್ಟಿ ಗೆ ಪರಮಾತ್ಮನ ಅರಿವಾಗುವುದು.
ಪರಮಾತ್ಮನು ಭಕ್ತರ ಪ್ರಾರ್ಥನೆ ಕೇಳುವನು. ತನ್ನನ್ನು ಸ್ತುತಿಸುವವರ ಸಕಲ ಸಂಕಟಗಳನ್ನು ಪರಿಹರಿಸುತ್ತಾನೆ. ಯಾವನು ನನ್ನನ್ನು ಅನನ್ಯವಾಗಿ ನಿತ್ಯದಲ್ಲಿಯೂ ಸ್ಮರಿಸುವನೋ ಅವನಿಗೆ ನಾನು ಅತಿ ಸಲಭನೆಂದು ಭಗವಂತನದೇ ಹೇಳಿಕೆ ಇದೆ. ನನ್ನಲ್ಲಿಯೇ ಮನಸ್ಸನ್ನು ಇಟ್ಟುಕೊಂಡವನಾದರೆ ನನ್ನ ಪ್ರಸಾದದಿಂದ ಬಂದ ಎಲ್ಲಾ ಕಷ್ಟಸಂಕಟಗಳನ್ನು  ನೀನು ದಾಟಿ ಹೋಗುವಿ  ಎಂಬುವುದೂ ಕೂಡ ಭಗವಂತನ ಹೇಳಿಕೆಯೆ ಸರಿ.
ಆದರೆ ಅದು ಯಾವಾಗ?
 
ಒಬ್ಬ ಸಾವಿಕಾರನಿದ್ದಾನೆ ಎನ್ನಿ. ಬಡವನಾದ ಒಬ್ಬನು ಅವನೆಡೆಗೆ ಸಾಲಕ್ಕಾಗಿ ಹೋಗುತ್ತಾನೆ. ದಾನಕ್ಕಾಗಿ ಅಲ್ಲ, ಸಹಾಯಕ್ಕಾಗಿ ಅಲ್ಲ, ಬಡ್ಡಿಸಹಿತ ನಿನ್ನ ಗಂಟು ತಿರುಗಿ ಕೊಡುತ್ತೇನೆ ಎಂದು ಅವನನ್ನು ಪ್ರಾರ್ಥಿಸುತ್ತಾನೆ. ಹೀಗೆ ಬೇಡ ಬಂದವರೆಲ್ಲರಿಗೂ ಸಾಹುಕಾರನು ಸಾಲ ಕೊಡುತ್ತಾನೆಯೇ? ಸಾಹುಕಾರನು ಮೊದಲು ನೋಡುತ್ತಾನೆ. ಇವನು ಎಂಥ ಗುಣದವನು? ಇವನ ನಡತೆ ಎಂಥಹುದು?  ಆಡಿದಂತೆ ಮಾಡಬಹುದೇ? ಇನ್ನಾರಲ್ಲಾದರೂ ಹೀಗೆ ಸಾಲಮಾಡಿರುವನೇ? ಇದಬ್ನೆಲ್ಲಾ ನೋಡಿಕೊಂಡು ಸಾಲಪಡೆಯುವುದಕ್ಕೆ ಇವನು ಅರ್ಹನೆಂದು ನಿಶ್ಚಯ ಮಾಡಿಕೊಂಡು ಸಾಲ ಕೊಡುತ್ತಾನೆ.
ಹಾಗೆ ಪರಮಾತ್ಮನ ಭಕ್ತರಿಗೂ ಕೆಲವೊಂದು ಅರ್ಹತೆ ಬೇಕಾಗುತ್ತದೆ.
ಸುಸಂಸ್ಕೃತ ಮನಸ್ಸು, ಪರಿಶುದ್ದ ಆಚರಣೆ, ಅನನ್ಯ ಶರಣಾಗತಿ, ಇವೆಲ್ಲಾ ಇದ್ದಾಗಲೇ ಭಕ್ತನ ಭಕ್ತಿಗೆ ಬೆಲೆ. ಆಗ ಪರಮಾತ್ಮನ ಶಕ್ತಿಯ ನೆರವು ಅವನಿಗೆ ಲಭಿಸುತ್ತದೆ. ಅವನಿಲ್ಲದಿದ್ದರೆ ಯಾವುದೂ ಇಲ್ಲ.
ಬಡವರು ಸಾಹುಕಾರರಲ್ಲಿ  ಹೋಗಿ ಸಾಲ ಬೇಡುವರು. ಕಷ್ಟ ಸಂಕಟಗಳು ಅಡರಿ ಬಂದವರು ಬಂಧುಗಳ ನೆರವು ಕೋರುವರು.
ಆದರೆ ಇವರೆಲ್ಲರನ್ನು ರಕ್ಷಿಸಬಲ್ಲ ಪರಮಾತ್ಮನಲ್ಲಿ ಹೋಗು ಬೇಡುವುದಿಲ್ಲ. ಏಕೆಂದರೆ ಅವನಲ್ಲಿ ಅಂಥ ಅರ್ಹತೆಯಿರುವುದಿಲ್ಲ‌. ಅವನಿಗೆ ಪರಮಾತ್ಮನ ಶಕ್ತಿಯ ಅರಿವಾಗಿರುವುದಿಲ್ಲ.
ಶ್ರೀಮಂತನ ಹತ್ತಿರ ಸಾಲವನ್ನು ಪಡೆಯುವುದಕ್ಕಾಗಿಯಾದರೂ ಎಷ್ಟು ವಿನಯದಿಂದಲೂ, ಆದರದಿದಂದಲೂ, ಅವನ ಸ್ತುತಿಯನ್ನು ಮಾಡುವನೋ,ಹಾಗೆಯೇ ಪರಮಾತ್ಮನ ಸ್ತುತಿಯನ್ನು ಮಾಡಿದರೆ ಯಾವನು ತಾನೆ ಮುಕ್ತನಾಗಲಿಕ್ಕಿಲ್ಲ.ಎಂದು ಉಪನಿಷತ್ ನಲ್ಲಿ ಹೇಳಿದ್ದಾರೆ.
ಭಗವಂತನು ಹೇಳುತ್ತಾನೆ
ಯಾರು ನನ್ನನ್ನು ಯಾವ ದೃಷ್ಟಿ ಯಿಂದ ಶರಣು ಬರುವರೋ ಅವರಿಗೆ ನಾನು ಅದೇರೀತಿ ನೆರವಾಗುವೆನು. ನೀನೆ ಗತಿ ಎಂದು ಬೆನ್ನುಬಿದ್ದವರನ್ನು ಕಾಪಾಡುವೆನೆಂದು ಅಭಯವಿತ್ತಿದ್ದಾನೆ ಆತ. ಅನನ್ಯ ಭಕ್ತಿ ಯೊಂದರ ವಿನಃ ಮಿಕ್ಕ ಯಾವುದರ ಅಪೇಕ್ಷೆಯು ಭಗವಂತನಿಗೆ ಇಲ್ಲ