ಶ್ರೀ ಶ್ರೀಧರ ಗುರುಚರಿತ್ರೆ

(ಭಾಮಿನಿ ಷಟ್ಪದಿ ಕಾವ್ಯ)

(Many thanks to Mrs Vijaya Bhat of Atlanta,GA,USA for sharing this)

ಶ್ರೀ ಗಣೇಶಾಯ ನಮಃ

ಶ್ರೀಧರರ ಚರಿತೆಯನು ಪಾಡಲು |
ಹೇ ದಯಾಂಬುಧಿ ಗಣಪ ಕರುಣಿಸು |
ಮೋದದಿಂದಲಿ ಹರಸಿ ಶಾರದೆ ಮುಂದೆ ನಡೆಯಿಸಲಿ ||
ಮೇಧಿನಿಯ ಗುರು ಕವಿ ಪರಂಪರೆ |
ಸಾಧಿಸಿದ ಮಹಿಮೆಗಳಿಗೆರಗುವೆ |
ಭೇದವಿಡದಂತೆಲ್ಲ ಸಜ್ಜನರಿಂಗೆ ತಲೆಬಾಗಿ ||೧||

ಗುರುವರರು ತಿಳಿಯಲಿಕಸಾಧ್ಯರು |
ಕಿರಿಯನಿಂದಿದನೊರೆಯಲಾಗದು |
ಪರಮ ಕರುಣಾ ಸಿಂಧು ಹರಸಿದರಷ್ಟೆ ಸಾಧ್ಯವದು ||
ಹರುಷದಿಂದೆರಗುತ್ತ ಬೇಡುತ |
ಚರಣದಾಲಂಬನೆಗೆ ಫಲವಿರೆ |
ಫೊರೆವ ಗುರುವರ ತಾನೆ ದಾರಿಯ ತೋರಿ ಬೆಳಕಿನಲಿ ||೨||

ಕೈಹಿಡಿದು ನಡೆಸುವರು ಸಂತತ |
ಬಾಹ್ಯದಲ್ಲಿರದಂತರಾಳದಿ |
ಗುಹ್ಯದಲಿ ತಾ ಗುಹ್ಯ ರೂಪದಿ ನಿತ್ಯ ವಾಸಿಸುತ ||
ಸ್ನೇಹ ನೆಮ್ಮದಿ ಶಾಂತಿ ಕಾರಣ |
ಮೋಹ ಪರವಶತೆಯ ನಿವಾರಣ |
ದಾಹವಿಂಗಿಸಿ ನುಡಿಸಿ ಮುನ್ನಡೆಸೆನುತಲೆರಗುವೆನು ||೩||

ಹಿಂದೆ ಗೋದಾವರಿಯ ದಡದಲಿ |
ದುಂಡರಾಜರ ಮಠ ಸಮೀಪದಿ |
ಚೆಂದದಿಂದಾ ಪತಕಿ ವಂಶವು ಬಾಳಿ ಬಂದಿರಲು ||
ಅಂದು ಗಿರಿಮಾಜಿಯ ಕುಮಾರನು |
ಕುಂದಿರದ ತಿರುಮಾಜಿಯಾತಗೆ |
ಕಂದರಹ ಗೋವಿಂದ ನಾರಾಯಣರು ಬಂದಿಹರು ||೪||

ಕುಲಘನತೆ ಸದ್ಭಾವ ಜೀವನ |
ಗಳಿಸುತಲೆ ತಿರುಮಾಜಿಯಳಿಯಲು |
ಬಲುತರದ ಕೋಟಲೆಗೆ ಸಿಲುಕುತ ಸೋದರರು ಬಳಲಿ ||
ಬಳಿಕಲಂದಿಂದೂರು ಭೋದನ |
ಕಳೆದು ಹೈದ್ರಾಬಾದಿಗೈತರೆ |
ಗಳಿಸಿದರು ವಿದ್ಯಾರ್ಥಗಳ ಸನ್ಮಾರ್ಗಿಯಾಶ್ರಯದಿ ||೫||

ಯೋಗ್ಯ ಸತಿಯರ ಪಡೆದು ಜೀವನ |
ಸಾಗಿಸುತಲಿರೆ ಸತಿವಿಯೋಗದಿ |
ಭಾಗ್ಯಹೀನತೆಯಾಯ್ತು ನಾರಾಯಣನಿಗೇನೆನಲಿ ||
ಆಗ ಸಂಬಂಧಿಕರು ಚಿಂತಿತ |
ರಾಗಿ ಕಮಲಾ ಬಾಯಿಯೆಂಬ ಸು |
ಯೋಗ್ಯ ಕನ್ಯೆಯ ಹುಡುಕಿ ಮದುವೆಯ ಮಾಡಿಸಲು ಮುದದಿ ||೬||

ಮಕ್ಕಳುದಿಸಿದರಿಬ್ಬರವರಿಗೆ |
ದುಃಖವದರೊಳಗೊಬ್ಬ ಮರಣಿಸೆ |
ಭಕ್ತಿಯಲಿ ಸಂಸಾರ ನೌಕೆಯು ಸಾಗುತಿರುವಾಗ ||
ತಕ್ಕ ಸುತೆ ಗೋದಾವರಿಯು ತಾ |
ನುಕ್ಕಿ ಹರಿವೊಲು ಹುಟ್ಟಿ ಬಂದಳು |
ಮಕ್ಕಳಿಬ್ಬರು ಹಿರಿಯ ತ್ರೈಂಬಕ ಸಹಿತಲಾದಿನದಿ ||೭||

ನೆಮ್ಮದಿಯು ಗೈಗೆಟುಕದಿರಲಾ |
ಗೊಮ್ಮೆ ಜೋಯಿಸರೊಬ್ಬರೆಂದರು |
ನಿಮ್ಮ ಸಂಕಷ್ಟಗಳು ನಾಗರ ದೋಷದಿಂದಾಗಿ ||
ಸುಮ್ಮನಾ ದತ್ತನಿಗೆ ಮಣಿಯಿರಿ |
ಹೊಮ್ಮಲಿದೆ ಹೊಂಬೆಳಕು ಬೇಗದಿ |
ಹೆಮ್ಮೆಯಿದೆ ಮನೆತನಕೆ ಲೋಕದಿ ಮಾನ್ಯವೆನಲವರು ||೮||

ಕೇಳುತಂತೆಯೆ ಗೈದು ಸಂತಸ |
ತಾಳುತಲೆ ಸತಿ ಸಹಿತ ನೇಮದಿ |
ಬಾಳಿನುನ್ನತಿ ಬಯಸಿ ಬೇಡಿದರಂದು ಗುರುವರನ ||
ಗೋಳ ನೀಗಿಸಲೆಂದು ಸೇವೆಯ |
ವೇಳೆಯಲಿ ದತ್ತನಿಗೆ ಸಲ್ಲಿಸೆ |
ಲೀಲೆಯಲಿ ಭಗವಂತನೊಲಿದನು ದಂಪತಿಗಳಿಂಗೆ ||೯||

ದತ್ತನೊಲಿಯುತಲವರ ಸೇವೆಗೆ |
ಚಿತ್ತವಿಸಿ ತಾ ಬಂದು ನೆಲೆಸಿದ |
ಪೃಥ್ವಿಯೊಳಿತನು ಬಯಸಿ ಕಮಲಾಬಾಯಿಯುದರದಲಿ ||
ಹೊತ್ತು ಜಗದಾತ್ಮನನು ತಿಳಿಯದೆ |
ತತ್ತರಿಸುತಾ ತನ್ನ ಮಾತೆಯ |
ಹತ್ತಿರಕೆ ಬಂದವಳು ನೆರವನು ಯಾಚಿಸುತ್ತಿರಲು ||೧೦||

ಮಾತೆ ಬಾಯಾಬಾಯಿ ತನ್ನಾ |
ಪ್ರೀತಿಯಲಿ ಹಿರಿಸುತೆಯ ಮನೆಯೊಳ |
ಗಾತುರದಿ ಸಾಕಿದಳು ಬಲುಬಗೆಯಿಂದ ಜತನದಲಿ ||
ಖ್ಯಾತ ದೇಸಾಯಾಲಯದೊಳಿರೆ |
ಜಾತನುದಿಸುವ ವೇಳೆ ಕಾಯುತ |
ಲೀತೆರದಿ ಪುರುಷೋತ್ತಮನ ಸಂಜನ್ಮ ಸಮಯದಲಿ ||೧೧||

ದೇವತತಿ ಪೂಜಿಸುವ ದಿವಸದಿ |
ನೋವನುಣ್ಣದಲಾ ಮಹಾಸತಿ |
ಕಾವ ದೈವವ ಹೆರುವ ಸಂತೋಷದಲಿ ಮೈಮರೆಯೆ ||
ದೇವ ದತ್ತ ಜಯಂತಿಯಾದಿನ |
ಸಾವಕಾಶದೊಳಿಳಿದು ಬರುತಿರ |
ಲೋವೆಯಲಿ ಪುರಜನರು ಸಂಭ್ರಮ ಪಡುತಲಿರುವಾಗ ||೧೨||

ಮೆರವಣಿಗೆ ಬಂದಿರಲು ಮನೆಯೆದಿ |
ರಿರಲು ಕೂಸತ್ತುದುದ ಕೇಳುತ |
ಸರುವರಲಿ ಸಂತಸವು ಜಾಗಟೆ ತಾಳಗಳು ಮೊಳಗೆ ||
ಪರಮ ಪುರುಷನು ಧರೆಗೆ ಬಂದನು |
ಮೆರೆವ ದತ್ತ ಜಯಂತಿಯಾದಿನ |
ಹರುಷಪಟ್ಟರು ದತ್ತನೇ ಮೈಯಾಂತ ದಿಟವೆಂದು ||೧೩||

ಲಾಡಚಿಂಚೋಳಿಯಲಿ ಜನಿಸಿದ |
ನಾಡಿಗೊಡೆಯನು ನಗುನಗುತ ತಾ |
ನಾಡಿರಲು ರಾಮನ ಸುನಾಮವನುಸಿರಿನಲಿ ಕೇಳಿ ||
ರೂಢಿಗಚ್ಚರಿಯಿವನು ಸಿರಿಧರ |
ನೋಡಿದವರೆಂದೆನುವರೀತೆರ |
ವಾಡುತಿದ್ದನು ಬಾಲಕನು ಪೂರ್ಣಿಮೆಯ ಚಂದ್ರನೊಲು ||೧೪||

ಹೆಸರದಿಟ್ಟಾ ಶ್ರೀಧರನ ಪಾ |
ಲಿಸುತಲಿರೆ ನಾರಾಯಣನ ಪದ |
ಬೆಸನದಲಿ ಪಡೆದಿಹನು ತಂದೆಯು ಮೋಕ್ಷ ಧಾಮವನು ||
ಕಸುವಿನಲಿ ಮಾತೆಯೊಳು ಲೋಕದ |
ವಿಷಯ ಚೋದ್ಯಗಳನ್ನು ಬೋಧಿಸು |
ತಸುವಳಿದ ಪಿತನೆಂಬ ಚಿಂತೆಯ ಮರೆಸಿದನು ಮನೆಗೆ ||೧೫||

ಮುಂದೆ ಮನೆಯಲಿ ಸಾಲ ಬಾಧೆಯು |
ಬಂದಿರಲು ಹಿರಿಯಣ್ಣ ದುಡಿಯುತ |
ಲಂದು ರುಜೆಯಲಿ ಮಡಿದ ನೋವಲಿ ನೊಂದಳಾ ಮಾತೆ ||
ಕುಂದದಿರು ಸಾಯುಜ್ಯ ಪದವನು |
ಹೊಂದಿರುವರೆಂದೆನಲು ಕುವರನು |
ಮುಂದೆ ರಾಜನೆನುತ್ತ ಮಗನನು ಪಾಲಿಸುತ್ತಿರಲು ||೧೬||

ಅಕ್ಕ ಗೋದಾವರಿಯು ಪತಿಗೃಹ |
ಹೊಕ್ಕು ಸಂತೋಷದಲಿ ಬದುಕಿರೆ |
ತಕ್ಕ ಮನೆತನದಲ್ಲಿ ಮೆಚ್ಚುಗೆಯಿಂದಲಿರುವಾಗ ||
ಮುಕ್ತಿ ಹೊಂದಿದಳಾಕೆಯೆನ್ನುವ |
ವಿಕ್ಲಬದ ಸುದ್ದಿಯಲಿ ಮಾತೆಯು |
ಕಕ್ಕುಲತೆಯಲಿ ಮರುಗಿ ಮಂಚದಿ ಮಗನ ಬಳಿ ಕರೆದು ||೧೭||

ಮಗನೆ ನಾನಳಿಯುವೆನು ನಿಶ್ಚಯ |
ಮಿಗುವರಿಯದಲೆ ನೀನು ಬಾಳಿರು |
ಸೊಗಸುಗಾರನ ತೆರದೊಳೆನ್ನುತ ಮಗನ ಕೈ ಹಿಡಿದು ||
ಜಗದ ಮಹಿಳೆಯರನ್ನು ತಾಯಿಯ |
ಬಗೆಯಲೇ ಕಾಣುವುದನೆನ್ನುತ |
ಲೊಗೆದಳಾ ತನುವನ್ನು ಮಗನಿಗೆ ಹತ್ತು ವರ್ಷದಲೇ ||೧೮||

ಅಂತ್ಯ ಸಂಸ್ಕಾರವನು ಕುಲವಿಧಿ |
ಯಂತೆ ಮಾಡುತ ದಾನ ಧರ್ಮವ |
ನಂತ ನಾರಾಯಣನಿಗರ್ಪಣೆಯೆನುತ ಸರ್ವವನು ||
ಚಿಂತಿಸದೆ ತಾ ಕೊಟ್ಟು ಹಿರಿಯರ |
ಶಾಂತಿ ಸದ್ಗತಿಗಾಗಿ ಕೋರಿದ |
ನಂತರದೊಳೊಬ್ಬಂಟಿಯಾಗಿರಲೇಕಿದೆಂದೆನುತ ||೧೯||

ಸಾಲ ಕೊಟ್ಟವರುಗಳ ಋಣವಾ |
ವೇಳೆಯಲಿ ತೀರಿಸುವ ಕಾರಣ |
ಬಾಲಕನು ಮನೆಯನ್ನೆ ಕೊಟ್ಟನು ದುಃಖವಿಲ್ಲದಲೇ ||
ಮೇಲುಳಿದ ವಸ್ತುಗಳ ಹಂಚಿದ |
ಗೋಳಿನಿಂದಿಹ ಬಡವರಿಗೆ ತಾ |
ನಾಳೆಗೆಂದೇನೆನುತ ಯೋಚನೆ ಮಾಡದಂತಿರಲು ||೨೦||

ಕರೆದ ಸಂಬಂಧಿಕರ ಮನೆಯೊಳ |
ಗಿರುತ ವಿದ್ಯಾಭ್ಯಾಸ ಮಾಡುತ |
ಹಿರಿಯರೆಂದಿಹ ತೆರದಿ ಗುಲ್ಬರ್ಗೆಯನು ಸೇರಿದನು ||
ನಿರತ ಸೇವಾಕಾರ್ಯ ಸಂಯಮ |
ಭರಿತನೆಂಬುವ ಪರಿಯೊಳಿರುತಿರೆ |
ದೊರೆತ ಸಮಯದಲೋದುತಲೆ ಬಲು ಜಾಣನೆನಿಸಿದನು ||೨೧||

ಪುಣೆಯ ಶಾಲೆಯ ಸೇರಲೆನ್ನುತ |
ಮನದಿ ಯೋಚನೆ ಮಾಡಿ ಹಿರಿಯರ |
ಅನುಮತಿಯ ತಾ ಪಡೆದ ಗುರುತಿನ ಪತ್ರಗಳ ಸಹಿತ ||
ನೆನೆದು ತನ್ನಯ ಜನನಿ ಜನಕರ |
ಮಣಿದು ಹಿರಿಯರಿಗೆಲ್ಲ ಹೊರಟನು |
ಕೊನೆಯಿರದ ವಿದ್ಯೆಯನು ಸಾಧಿಸಲೆಂದು ಧ್ಯೇಯದಲಿ ||೨೨||

ನೋಡೆ ವಿದ್ಯಾಲಯವ ಪುಣೆಯಲಿ |
ಜೋಡಿಸುತ ಕರಗಳನು ಹಿಂದಿನ |
ನಾಡ ಹಿರಿಯರು ಕಟ್ಟಿರುವ ಪರಿಗಳಿಗೆ ತಲೆಬಾಗಿ ||
ಮೂಡಿರಲು ಹಿರಿಯಾಸೆ ಮುಖ್ಯರ |
ಬೇಡಿ ಸೇರಿದ ಶಾಲೆಗಾದಿನ |
ಮಾಡಿಕೊಟ್ಟರು ವಸತಿಗೆಂದದನಾಥ ಮಂದಿರದಿ ||೨೩||

ಇಲ್ಲಿ ಕಲಿತವನೊಬ್ಬ ಮುಂದಕೆ |
ಬಲ್ಲ ಸಾಹಸಿಯಾಗಿ ಲೋಕವ |
ನೆಲ್ಲ ಪಾಲಿಪ ನಾಯಕನೆ ತಾನಾಗುವನು ದಿಟದಿ ||
ಅಲ್ಲಿ ಬರೆದಿರಲಿಂತು ಸಾಲುಗ |
ಳೆಲ್ಲವನು ತಾನೋದಿ ಸಂತಸ |
ದಲ್ಲಿ ನಿಳಯದ ನಿಯಮಗಳ ತಪ್ಪಿಸಿದೆ ಪಾಲಿಸುತ ||೨೪||

ರಾಮ ನಾಮವ ಸತತ ಜಪಿಸುತ |
ನೇಮದಲಿ ಮಧುಕರಿಯ ಮಾಡಿ ವಿ |
ರಾಮದಲಿ ಸೇವೆಯನು ದೀನರಿಗೆನುತಲಾಚರಿಸಿ ||
ಪ್ರೇಮಮಯ ತಾನಾಗಿ ಸರ್ವ ನಿ |
ಯಾಮಕನ ಕಾರುಣ್ಯ ಕವಚದಿ |
ಸಾಮದಲಿ ಸಾಧನೆಯು ಕಲಿಕೆಯೊಳಿರುತ ಮೊದಲಾಗಿ ||೨೫||

ಗೀತೆಯನು ಕಂಠಸ್ಥಗೊಳಿಸುತ |
ಸಾತಿಶಯದಲಿ ನಿತ್ಯ ಪಠಿಸುತ |
ಮಾತೆಯೆನ್ನುತ ಗೋವುಗಳಿಗರ್ಧವನು ಭಿಕ್ಷೆಯಲಿ ||
ಪ್ರೀತಿಯಿಂದೀಯುತ್ತಲುಣ್ಣುವ |
ರಾತ್ರಿಯಾಹಾರವನು ತಿನ್ನದ |
ಲೀ ತೆರದ ನಡೆಯಿಂದ ಸುತ್ತಲಿನವರು ಬೆರಗಾಗೆ ||೨೬||

ನಿನ್ನ ಗುರಿಯೇನೆನಲು ದೈವದ |
ಮನ್ನಣೆಯ ಸಂಪೂರ್ಣ ಕೃಪೆಯನು |
ಮುನ್ನ ಸಂಪಾದಿಸುತ ದೀನರ ಸೇವೆ ಮಾಡುವುದು ||
ಎನ್ನುತಲೆ ಬರೆದುದನು ಗುರುಗಳು |
ಸನ್ನಡತೆಯಿಂದಿರುವ ಬಗೆಯನು |
ಕಣ್ಣುಗಳನರಳಿಸುತ ಮೆಚ್ಚಿದರಿವನು ಸಾಧಕನು ||೨೭||

ತೊರೆವೆ ನಾಲಿಗೆ ಚಪಲವೆನ್ನುತ |
ಲಿರಿಸಿ ಗೋಮಯದೊಡನೆ ಪೇಡಗ |
ಳರೆದು ನುಂಗುತ ಮತ್ತೆ ಕಕ್ಕುತ ಮರೆತರಾ ಸವಿಯ ||
ಗುರುವು ಪಳನಿಟ್ಕರರು ಕಾಣುತ |
ಲರಿತರಿವ ಯೋಗೀಶನಹನೆಂ |
ದಿರಿಸುತತಿ ಕಾಳಜಿಯೊಳಾತಗೆ ಬೋಧಿಸುತ್ತಿರಲು ||೨೮||

ಗುರುವು ಬೇಕೆನಗೀಗ ಸತ್ಪಥ |
ಪರಮ ಶಾಂತಿಯ ತೋರುವಾತನು |
ತೊರೆವೆನೆಲ್ಲವ ಲೌಕಿಕದ ಮೇಲಾಸೆಯಿರದೆನಲು ||
ಗುರು ಸಮರ್ಥರು ರಾಮದಾಸರು |
ಇರವು ಸಜ್ಜನಗಡದಲವರದು |
ಚರಣ ಪಾದುಕೆಗಳಲಿ ದರ್ಶನ ನೀಡುತಿಹರೆಂದು ||೨೯||

ಬೋಧಿಸಲು ಪಳನಿಟ್ಕರರು ತಾ |
ಮೋದಗೊಂಡದ ಕೇಳಿ ನಿಶ್ಚಯ |
ವಾದುದೀ ದಸರೆಯಲೆ ಪೋಪೆನು ತಪವ ಮಾಡಲಿಕೆ ||
ಶ್ರೀಧರರ ನುಡಿ ಕೇಳುತೆಲ್ಲರು |
ವಾದಿಸದೆ ತಲೆದೂಗುತೆಂದರು |
ಸಾಧನೆಯ ಮಾಡುವಿರಿ ನಿಶ್ಚಯವೆನುತ ಬೆಂಬಲಿಸೆ ||೩೦||

ಘೋಷಣೆಗಳೆಂದೆಂಟು ವಾಕ್ಯವ |
ತೋಷದಿಂದಲೆ ಬರೆದು ಪತ್ರದಿ |
ಈಶಗರ್ಪಣೆಯೆನುತಲಗ್ನಿಗೆ ವಿಜಯದಶಮಿಯಲಿ ||
ಪೋಷಿಸಿಡು ನೀನೆನುತಲಾಹುತಿ |
ಯಾ ಸಮಯದಲಿ ಹಾಕಿ ಮುಂದಕೆ |
ಭಾಷೆಯಿದು ನೀವ್ ಕೇಳಿರೆನ್ನುತ ಪೇಳ್ದರೆಲ್ಲರಿಗೆ ||೩೧||

ಹೆಣ್ಣು ಗಂಡೆಂದೆಂಬ ಭೇದವ |
ದೆನ್ನಲಿರದೆಂದೆಂದಿಗೂ ದಿಟ |
ಹೊನ್ನು ಮಣ್ಣುಗಳಾಸೆಯಿರದೀ ತನುವು ಲೋಕಕ್ಕೆ ||
ಎನ್ನ ತಾಯಿ ಸಮಾನ ಮಹಿಳೆಯ |
ರೆನ್ನ ಜೀವನ ಬೊಮ್ಮಚರ್ಯೆಯು |
ಮುನ್ನ ದೀನರ ಸೇವೆ ಮಾಡುವೆನೊಲ್ಲೆ ಮಠಮಾನ್ಯ ||೩೨||

ಎಂದಿಗೂ ಸುಖ ಸಂಪದಗಳಲಿ |
ಬಂಧಿಯಾಗದೆ ಧರ್ಮಪಾಲನೆ |
ಯೊಂದೆ ಸಾಧನೆ ಮಾಡಿ ಧರ್ಮಧ್ವಜವ ನಿಲ್ಲಿಸುವೆ ||
ಮುಂದೆ ಸಮದೃಷ್ಟಿಯಲಿ ಸರ್ವರೊ |
ಳೊಂದು ಭೇದವ ಮಾಡದಲೆ ತಾ |
ನಿಂದು ದೀನಾರ್ತರನು ಸೇವೆಯ ಮಾಡಿ ಜೀವಿಸುವೆ ||೩೩||

ಗೆಳೆಯರೆದಿರಿಂತಾಡಿ ರಾತ್ರಿಯ |
ಕಳೆದು ಮಾರನೆ ದಿವಸದುದಯದಿ |
ಜಳಕ ಸಂಧ್ಯಾವಂದನೆಗಳನು ಮಾಡಿ ಪೊರಮಡಲು ||
ನಿಲದ ಶಿಷ್ಯನಿಗೊಂದು ನಾಣ್ಯವ |
ಬಳುವಳಿಗೆ ತಾ ಕೊಟ್ಟು ಹರಸುತ |
ಕಳುಹಿದನು ಗುರು ಕಣ್ಣಿನಂಚಲಿ ಭಾಷ್ಪ ಜಿನುಗಿರಲು ||೩೪||

ಸುರಿವ ಮಳೆ ಚಳಿ ಗಾಳಿಯೆನ್ನದೆ |
ವಿರಮಿಸದಲೇ ನಡೆಯುತಿರುತಿರೆ |
ಧರಿಸಿರುವ ವಸನಗಳು ನೆನೆಯುತ ಮೈಯು ನಡುಗುತಿರೆ ||
ಸ್ಮರಣೆ ರಾಮನ ರಾಮದಾಸರ |
ಪರಿವೆ ಮತ್ತಿರದಂತೆ ಸಾಗುತ |
ಲಿರಲು ಸಂಧ್ಯಾ ಸಮಯವಾಯಿತು ದಾರಿಗಾಣದೊಲು ||೩೫||

ಹಿಂದು ಮುಂದಡ್ಡಾಡಿ ದಣಿದರು |
ಕುಂದದುತ್ಸಾಹದಲಿ ನಡೆದರು |
ಮುಂದೆ ಬನ್ನೇಶ್ವರಕೆ ಹೋಗುವ ತಂಡ ಸಿಕ್ಕಿದುದು ||
ವೃಂದದೊಡಗೂಡುತ್ತ ಸಂತಸ |
ದಿಂದ ರಾತ್ರಿಯೊಳೆಲ್ಲ ನಡೆಯುತ |
ಮಂದಿರದ ಬಳಿ ಬರಲು ನೇಸರ ಮೂಡಣದಿ ಕಂಡ ||೩೬||

ಶಿವಶಿವಾ ಧನ್ಯತೆಯ ನೀಡೆಂ |
ದವನಿಯಲಿ ಸಾಷ್ಟಾಂಗವೆರಗುತ |
ತವಕದಲಿ ರಮಣೀಯ ಪರಿಸರದಲ್ಲಿ ಸಂಚರಿಸಿ ||
ಶಿವಭವನ ಪುಷ್ಕರಣಿಯಲಿ ಮಿಂ |
ದವಸರದಿ ಗುಡಿಯೊಳಗೆ ಹೋಗುತ |
ಶಿವನ ದರ್ಶನದಿಂದ ಪುಳಕಿತರಾಗಿ ಮೈಮರೆತು ||೩೭||

ಆ ದಿವಸ ಮಧ್ಯಾಹ್ನದನಕವು |
ಮೋದದಿಂ ಧ್ಯಾನಸ್ಥರಾದರು |
ಸಾಧನೆಗೆ ಶಂಕರನ ಕರುಣೆಯ ಬೇಡುತೆರಗಿದರು ||
ಶ್ರೀಧರರು ಮಧ್ಯಾಹ್ನ ಜಳಕವ |
ದಾದ ನಂತರ ಭಿಕ್ಷೆಗೆನ್ನುತ |
ಹಾದಿಯಲಿ ಬರುವಾಗ ತಹಶೀಲ್ದಾರ ನೋಡಿದನು ||೩೮||

ತೇಜಪುಂಜವ ಕಂಡ ತೆರದಲಿ |
ಸೋಜಿಗದಿ ತಲೆಬಾಗಿ ನಮಿಸಿದ |
ಭೋಜನಕೆ ದಯಮಾಡಿರೆನ್ನುತ ಮನೆಗೆ ಕರೆದಿಹನು ||
ಭೋಜನಕೆ ಬರಲಾರೆ ಮಧುಕರಿ |
ಯೋಜಿಸೆನ್ನುತ ಪಡೆದು ಶಿವನಿಗೆ |
ಪೂಜಿಸುತ ಗೋಗ್ರಾಸವಿತ್ತದರರ್ಧ ಭುಂಜಿಸುತ ||೩೯||

ರಾತ್ರಿಯಾ ಮಂದಿರದಿ ಕಳೆಯುತ |
ಸಾತಿಶಯದಲಿ ನಸುಕಿಗೇಳುತ |
ಕೂತಿರದೆ ಜಳಕಾಹ್ನಿಕಂಗಳ ಮಾಡುತರ್ಚಕರ ||
ಮಾತನಾಡಿಸುತಿದ್ದ ನಾಣ್ಯವ |
ರೀತಿಯಿಂದೀಯುತ್ತ ಮುಂದಕೆ |
ಆತುರದಿ ಸಾತಾರ ದಾರಿಯ ಹಿಡಿದು ನಡೆದರಲಾ ||೪೦||

ನೀರು ಕಂಡೆಡೆಯಲ್ಲಿ ಮೀಯುತ |
ಕೇರಿಯಲಿ ಭಿಕ್ಷಾನ್ನ ಪಡೆಯುತ |
ಊರ ದೇವಾಲಯದ ಚಾವಡಿಗಳಲಿ ವಿರಮಿಸುತ ||
ಯಾರ ನೆರವುಗಳನ್ನು ಕೇಳದೆ |
ದೂರ ದಾರಿಯಲೈದು ಸಾಗುತ |
ಸೇರಿದರು ಸಾತಾರದಲಿ ಮಾರುತಿಯ ಮಂದಿರವ ||೪೧||

ಹನುಮನಡಿಗೆರಗುತ್ತ ತಮ್ಮಯ |
ಜನುಮ ಸಾರ್ಥಕವಾಗಿಸೆನ್ನುತ |
ಮನದ ಸಂಕಲ್ಪಗಳ ಸಲಿಸೆಂದೆನುತ ಬೇಡಿದರು ||
ದಿನಪನುದಯದೊಳೆದ್ದು ಪೂಜಿಸು |
ತನುಮತಿಯ ಪಡಕೊಂಡು ಹೊರಟರು |
ಸನಿಹದಲ್ಲಿರಲೇಳು ಮೈಲಿಯ ಸಜ್ಜನಾದ್ರಿಯೆಡೆ ||೪೨||

ನದಿಯು ಊರ್ಮಡಿಯಲ್ಲಿ ಮುಳುಗುತ |
ಬದಿಯ ಬಂಡೆಯನೇರಿ ಕುಳಿತಿರೆ |
ಎದುರಿನಲಿ ಕಾಣಿಸಿತು ಸಜ್ಜನಗಡದ ಮಂದಿರವು ||
ಬದುಕು ಸಾರ್ಥಕ ರಾಮದಾಸರ |
ಪದಕಮಲದಾಸರೆಯೊಳೆನ್ನುತ |
ಮುದದೊಳೆಲ್ಲವ ಬಿಟ್ಟು ಕೌಪೀನದಲೆ ಸಾಗಿದರು ||೪೩||

ಜಯತು ಜಯಜಯ ರಾಮ ಜಯಜಯ |
ಜಯ ಸಮರ್ಥಗೆ ರಾಮದಾಸರೆ |
ಜಯತು ಜಯ ಜಯವೆಂದು ಘೋಷವ ಮಾಡಿ ಮೈಮರೆತು ||
ದಯದೊಳೀಕ್ಷಿಸುತೆನ್ನ ಪಾಲಿಸು |
ಭಯ ನಿವಾರಿಸು ಗುರಿಯ ತೋರಿಸು |
ಲಯವ ಮಾಡಿಸು ದೋಷವೆಂದು ಸಮಾಧಿಗೆರಗಿದರು ||೪೪||

ಭಾವ ತನ್ಮಯರಾಗುತೆರಗಿರೆ |
ದೇವ ಸದ್ಗುರುನಾಥ ಕರುಣದಿ |
ಧಾವಿಸುತಲದೃಶ್ಯ ರೂಪದಿ ನೇವರಿಸುತಿವರ ||
ಕಾವಿ ಬಟ್ಟೆಯ ಮೈಗೆ ಹೊದೆಸಲು |
ಸಾವಧಾನದೊಳರಿವು ಮೂಡಿತು |
ಕಾವ ದೈವದ ಸನಿಹ ಸುಖದಲಿ ನಿಂತೆ ತಾನೆನುತ ||೪೫||

ಸನ್ನಿಧಿಯಲಾನಂದ ಪಡುತೊಳ |
ಗಣ್ಣಿನಲಿ ಸದ್ಗುರುವನೀಕ್ಷಿಸಿ |
ನಿನ್ನ ಸಾಮೀಪ್ಯದಲಿ ಸೇವಕನಾಗಿಸೆಂದೆನುತ ||
ಕನ್ನಡಿಯ ಗಂಟಿದುವೆ ಲೋಕದೊ |
ಳಿನ್ನು ಮುಳುಗಿಸ ಬೇಡವೈ ದೊರೆ |
ಯೆನ್ನುತಲೆ ಕೋರಿದರು ಯೋಗದಿ ಮಗ್ನರಾಗಿರುತ ||೪೬||

ಮೂರು ದಿನಗಳು ಕಳೆಯಲಲ್ಲಿಹ |
ಪಾರುಪತ್ಯದ ಜನರು ಕರೆಯುತ |
ಸಾರಿದರು ಮುಂದಿನ್ನು ಸೌಕರ್ಯಗಳು ಸಿಗದೆನುತ ||
ಸೇರಿಸಿರಿ ಸೇವಕರ ಗುಂಪಿನೊ |
ಳಾರಿಗೂ ಕೇಡೆಣಿಸದಲೆ ಪರಿ |
ಚಾರಿಕೆಯ ಮಾಡುವೆನು ನಿರತದೊಳೆನಲು ಗುರುರಾಯ ||೪೭||

ಒಪ್ಪಿ ಸಮ್ಮತಿಸಿದರು ಹಿರಿಯರು |
ತಪ್ಪದಲೆ ಕಾರ್ಯಂಗಳೆಸಗಲು |
ಇಪ್ಪ ಪರಿಯಂತರವು ಗುರುಗಳು ನಡೆಸಿ ತೋರಿದರು ||
ಸುಪ್ತ ಭಾವ ವಿಕಾಸವಾಗಲು |
ಚಿಪ್ಪಿನೊಳಗಿಹ ಕೂರ್ಮನಂದದಿ |
ತಪ್ಪಿಸದೆ ಪರಿಸೇವೆ ದಾಸತ್ವದಲಿ ಮುಳುಗಿದರು ||೪೮||

ಬೆಳಗು ಮೂಡುವ ಮುನ್ನವೇಳುತ |
ತೊಳೆದು ಲಾಯ ಸಭಾಂಗಣಗಳನು |
ಕೊಳೆಯ ಗುಡಿಸುತ ಸಗಣಿಯಲಿ ಸಾರಿಸುವರಂಗಳವಾ ||
ಕೊಳದಿ ಜಳಕವ ಮಾಡಿ ನಸುಕಲಿ |
ಬೆಳಗಿ ಕಾಕಡದಾರತಿಯ ಬಲು |
ನಲಿವಿನಲಿ ಪೂಜಿಸುತ ನೂರೆಂಟು ಪ್ರದಕ್ಷಿಣೆಯಾ ||೪೯||

ಮಾಡುತಾದರದಿಂದ ನಮಿಸುತ |
ನೀಡುತರ್ಘ್ಯಾಹ್ನಿಕವ ಮುಗಿಸುತ |
ಕೂಡಿದವರೆಲ್ಲರಿಗೆ ಬೆಳಗಿನ ತಿಂಡಿಯುಣಬಡಿಸಿ ||
ರೂಢಿಯಿಂದಿನ್ನೊಮ್ಮೆ ಜಳಕವ |
ಮಾಡುತಲೆ ಗಂಧಾಕ್ಷತೆಗಳ ಸ |
ಗಾಢದಿಂದಲೆ ಗುರುವಿನಭಿಷೇಕಕ್ಕೆ ನೀರ್ತುಂಬಿ ||೫೦||

ಕಾಳುಗಳನು ಹಸಾದವೆನ್ನುತ |
ಹಾಲಿನೊಂದಿಗೆ ತುಸುವೆ ತಿನ್ನುತ |
ವೇಳೆಗಳೆಯದೆ ವಸ್ತ್ರ ಪಾತ್ರೆಗಳನ್ನು ತೊಳೆಯುವರು ||
ಕೇಳಿ ಮಧ್ಯಾಹ್ನದಲಿ ಮಧುಕರಿ |
ಪಾಲು ಗೋವ್ಜಲಚರಗಳಿಂಗಾ |
ಮೇಲುಳಿದುದನು ರಾಮನಾಮವ ಜಪಿಸಿ ಭುಂಜಿಪರು ||೫೧||

ಚಿತ್ತದುಲ್ಲಸದಿಂದ ಭಕ್ತರ |
ಹೊತ್ತು ಹೊತ್ತಿನಲೆಲ್ಲ ಸೇವೆಯ |
ದತ್ತಪೂಜೆಯಿದೆನುತ ಸಂತೋಷದಲಿ ಮಾಡುವರು ||
ಮತ್ತೆ ಸತ್ಸಂಗದಲಿ ಸೇರುತ |
ಕತ್ತಲಾಗದ ಮುನ್ನವೇ ಹೂ |
ಪತ್ರೆಗಳ ಕೊಯ್ಯುವರು ನಾಳಿನ ಪೂಜೆಗೆಂದೆನುತ ||೫೨||

ಇರುಳಿನಲಿ ಗುಡಿಯೊಳಗೆ ಸೇವೆಯ |
ವಿರಚಿಸುವೆ ತಾನೆನುತ ಕೇಳುತ |
ಹಿರಿಯರೊಪ್ಪಿಗೆಯಿಂ ಸಮರ್ಥರ ಶಯನಮಂದಿರದಿ ||
ವಿರಮಿಸಿರಲೇಕಾಂತದಲಿ ಗುರು |
ವರನ ದರುಶನ ವಾಯಿತದುಭುತ |
ನಿರತ ಕೈಂಕರ್ಯದಲಿ ಸಿದ್ಧಿಯ ಪಡೆದರಾ ದಿನದಿ ||೫೩||

ಹೂವ ತೋಟದಿ ಮೂರು ದಿನಗಳು |
ಯಾವ ಚಿಂತೆಗಳಿರದೆ ಯೋಗದಿ |
ಭಾವ ತನ್ಮಯರಾಗಿ ಸಾಧನೆಯನ್ನು ಮಾಡಿದರು ||
ನೋವ ಮಾಡದ ಮಾತುಕೃತಿಯಿಂ |
ಕಾವ ದೈವವೆನುತ್ತ ಜನರಲಿ |
ಭಾವನೆಗಳುಂಟಾಯಿತಲ್ಲಿಹ ಮೂರು ವರ್ಷದಲೇ ||೫೪||

ಮತ್ಸರಿಗಳಿದ್ದಿರಲು ಕೆಲವರು |
ನಿತ್ಯ ಹಂಗಿಸುತಿರಲು ಕುಹಕದಿ |
ಚಿತ್ತ ಚಂಚಲವಾಗದಲೆ ಗುರುರಾಯ ನಗುತಿಹರು ||
ಕತ್ತಲಿರುವುದರಿಂದ ಬೆಳಕ ಮ |
ಹತ್ವವರಿವಾದಂತೆ ಲೋಕದ |
ಸತ್ಯ ಸತ್ವಗಳನ್ನು ತಿಳಿದವರೆಲ್ಲ ಮಣಿಯುವರು ||೫೫||

ಒಂದು ನಡುರಾತ್ರಿಯಲಿ ಸದ್ಗುರು |
ಬಂದು ದರ್ಶನ ನೀಡುತಿವರಿಗೆ |
ಎಂದರೈ ನಡೆ ದಕ್ಷಿಣಾಂತರದಲ್ಲಿ ಧರ್ಮವನು ||
ಕಂದ ನೀನುದ್ಧರಿಸಬೇಕಿದೆ |
ಯೆಂದ ನುಡಿಯನು ಕೇಳುತಾಕ್ಷಣ |
ವಂದಿಸುತ ಗುರುವಾಜ್ಞೆ ಪಾಲಿಸಲೆಂದು ಪೊರಮಡುತ ||೫೬||

ದಾಸಬೋಧೆಯ ಜೊತೆಗೆ ಗೀತಾ |
ಭಾಷ್ಯೆ ಪುಸ್ತಕಗಳನು ಹಿಡಿಯುತ |
ಆಸನದ ಕೃಷ್ಣಾಜಿನದ ಸುರುಳಿಯನು ಜಲಕುಡಿಕೆ ||
ತೋಷದಲಿ ಜೊತೆಗಿರಿಸಿ ಹೊರಟರು |
ಲೇಸಿದೆನ್ನುತ ಮಧ್ಯರಾತ್ರಿಯೆ |
ಭೂಷಣವು ಕೌಪೀನ ಮಾತ್ರದಿ ಗಡವನಿಳಿದರಲಾ ||೫೭||

ಮುಳ್ಳು ಪೊದೆಗಳ ಬಳಸುತಿಳಿದರು |
ಕಲ್ಲುಗಳನೆಡವಿದರು ನೋಯದೆ |
ನಿಲ್ಲದೆಲ್ಲಿಯು ಬೆಳಗು ಮೂಡುವ ತನಕ ಸಾಗಿದರು ||
ಹಳ್ಳವೊಂದಿರಲಲ್ಲಿ ಮಿಂದರು |
ಹಳ್ಳಿಯೊಂದರ ಜನರು ನೀಡಿದ |
ಬೆಲ್ಲ ಕಡಲೆಗಳನ್ನು ಸೇವಿಸಿ ದಕ್ಷಿಣದ ಕಡೆಗೆ ||೫೮||

ನಿಲದೆ ಸಾಗುತಲಿದ್ದ ಗುರುವನು |
ಹಲವರುಪಚರಿಸಿದರು ದಾರಿಯ |
ಬಳಿಯ ದೇವಾಲಯದಿ ಸಜ್ಜನರಿತ್ತ ಭಿಕ್ಷೆಯಲಿ ||
ಕೆಲವು ತಾಣದಿ ಮೂಢರಿವರನು |
ಚಲಿಪ ಭೂತ ಪಿಶಾಚಿಯೆಂದರು |
ಬಳಿಕ ಕಾಣುತ ಭಕ್ತಿ ಭಾವದಿ ಕಾಲಿಗೆರಗಿದರು ||೫೯||

ನಡೆದು ಕೊಲ್ಲಾಪುರಕೆ ಬಂದರು |
ಗುಡಿಯಲಿಹ ಕುಲದೇವಿಯನು ಕಂ |
ಡಡಿಗೆರಗಿ ಬೇಡಿದರು ನಿಷ್ಠೆಯ ನಿತ್ಯವಿರಿಸೆಂದು ||
ಪಡೆದು ದೇವಿಯ ದಿವ್ಯ ವರವನು |
ನಡೆಯಲಲ್ಲಿಯೆ ಮಹಿಳೆಯೊಬ್ಬಳು |
ಬಿಡದೆ ದಾರಿಯನಡ್ಡಗಟ್ಟಲು ತನ್ನ ಮಗನೆನುತ ||೬೦||

ಆಸ್ತಿಯಿಷ್ಟಿರಲೇತಕೀಪರಿ |
ಕಷ್ಟದಲಿ ಸಂಚರಿಸುವೆಯೊ ನೀ |
ಇಷ್ಟದಲಿ ಸಂಸಾರಿಯಾಗುತ ಮನೆಯ ನಡೆಸೆನಲು ||
ಅಷ್ಟರಲಿ ಸೇರಿದರು ಪುರಜನ |
ದೃಷ್ಟಿಸುತಲರಿತಿಹರು ಸತ್ಯ ವಿ |
ಶಿಷ್ಟತನವನು ನಗುತ ಪಡೆದರು ಜಯ ಪರೀಕ್ಷೆಯಲಿ ||೬೧||

ಮುನ್ನಡೆದು ಸಂಕೇಶ್ವರದ ಪಥ |
ಕನ್ನಡದ ನಾಡನ್ನು ಸೇರುತ |
ಅನ್ನ ಪಾನಾದಿಗಳ ಕಾಣದ ದಿನಗಳಲಿ ಸಾಗಿ ||
ಮನ್ನಣೆಯ ಗೋಕರ್ಣ ಮಂಡಲ |
ವನ್ನು ಸಂಚರಿಸಿದರು ಮೋದದಿ |
ತನ್ನ ಭಕ್ತಿಯ ಸಲ್ಲಿಸಿದರಾ ದೇವದೇವನಿಗೆ ||೬೨||

ಅಷ್ಟಬಂಧ ಮಹೋತ್ಸವದಿ ತಾ |
ವಷ್ಟು ದಿನವಲ್ಲಿರುತ ಸೇವೆಯ |
ಇಷ್ಟ ಪಡುತೆಲ್ಲವನು ಮಾಡಿ ಮಹಾಬಲೇಶ್ವರಗೆ ||
ತುಷ್ಟಿಯಲಿ ಹೊರವಂಟು ನೆಡೆಯುತ |
ಶಿಷ್ಟ ಜನರಾತಿಥ್ಯ ಪಡೆಯುತ |
ಸೃಷ್ಟಿಪತಿಯಾಶಯದಿ ಹೊಕ್ಕರು ಶೀಗೆಹಳ್ಳಿಯನು ||೬೩||

ಶ್ರೀ ಶಿವಾನಂದರನು ಕಾಣುತ |
ತೋಷದಲಿ ನಮಿಸಲ್ಕೆ ಕಣ್ದೆರೆ |
ದಾಶಯದ ಸಂಪೂರ್ತಿಗಿವ ಸಿಕ್ಕಿದನು ದಿಟವೆನುತ ||
ಕ್ಲೇಶವಿರದದರಂತೆ ನುಡಿಯಲು |
ದಾಸತನ ತಮದೆಂದು ಹೇಳುತ |
ಬೇಸರಿಸದೆ ಮಠಾಧಿಕಾರವನೊಲದೆ ಹೊರಟರಲಾ ||೬೪||

ಯೋಗಸಿದ್ಧಿಗಳನ್ನು ಬಯಸೆನು |
ಸಾಗದೆನ್ನೊಳಗೆನುತ ವಿನಯದೊ |
ಳಾಗ ಹೊರಟರು ರಾತ್ರಿ ವೇಳೆಯೆ ಮಂಜುಗುಣಿಯೆಡೆಗೆ ||
ಸಾಗಿದೆಡೆ ಬೇತಾಳ ಭೂತದ |
ಬೇಗುದಿಯ ತೊಳಲಾಟ ಪಡುವರ |
ರೋಗ ರುಜಿನಗಳಿಂದ ನರಳಿದ ಜನರನುದ್ಧರಿಸಿ ||೬೫||

ಶ್ರೀನಿವಾಸನ ದರುಶನ ಸಮಾ |
ಧಾನ ಪಡುತಾ ಮಂಜುಗುಣಿಯಲಿ |
ಸಾನು ಸಂಚಾರದಲಿ ಶಿರಸಿಯ ದಾಟಿ ಬನವಾಸಿ ||
ಜೇನುಶಿವಲಿಂಗಕ್ಕೆ ನಮಿಸುತ |
ಸಾನುರಾಗದಿ ಸರಭಿಪುರವನು |
ತಾನು ಸೇರಿದ ನಿಲ್ಲದಲೆ ಗುರುರಾಯ ನಡೆನಡೆದು ||೬೬||

ರಂಗನಾಥನ ಗುಡಿಯಲುಳಿಯುತ |
ಸಂಗಡಿಹ ಭಕ್ತರನು ಪೊರೆದರು |
ತಂಗಿದರು ರೇಣುಕೆಯ ಪೂಜಿಸಿ ಚಂದ್ರಗುತ್ತಿಯಲಿ ||
ಇಂಗಿತದ ಪರಿಯಂತೆ ಕುಪ್ಪೆಯ |
ಲಂಗಳದ ಕೆರೆಯಲ್ಲಿ ಮೀಯುತ |
ಮಂಗಳಾಂಬಕರನ್ನು ವಂದಿಸಿ ಮುಂದೆ ಸಾಗರದಿ ||೬೭||

ಸೋತು ದೇಹಾಯಾಸ ಬಳಲಿಕೆ |
ಮಾತನಾಡಲು ಸಾಧ್ಯವಾಗದ |
ರೀತಿಯಲಿ ಕುಳಿತಿರುವ ಯತಿಗಳ ಕಂಡು ಪಂಡಿತರು ||
ಭೀತಿಯಲಿ ಮೈತಾಪ ಗಮನಿಸಿ |
ಆತುರಿಸುತಿರೆ ಮಾಸವೊಂದರೆ |
ಯಾಯ್ತು ಕಾನಲೆ ಛತ್ರದಲ್ಲುಪಚಾರ ಭಕ್ತರದು ||೬೮||

ದಾನಿಗಳ ಸಜ್ಜನರ ಸೇವೆಯ |
ತಾನು ಪಡೆದವರನ್ನು ಹರಸುತ |
ಲೇನನೆಂಬೆನು ಮುಂದೆ ಕೊಡಚಾದ್ರಿಯನು ಸೇರಲಿಕೆ ||
ಸ್ನಾನ ಪೂಜಾದಿಗಳ ನಿಯಮದ |
ಲೇನು ಲೋಪಗಳಾಗದಂತೆಯೆ |
ಕಾನು ಹಾದಿಯಲೈದು ಚಂಪಕಪುರಕೆ ವೇಗದಲಿ ||೬೯||

ದಾರಿ ಬಳಿಯಿಹ ಕೆರೆಯಲಿಳಿಯಲು |
ತೋರೆ ಕೃಷ್ಣಾನಂದ ಮಠವನು |
ಸೇರಿ ನರಹರಿಯನ್ನು ಪೂಜಿಸುತಲ್ಲಿರುವ ಯತಿಯ ||
ಕೋರಿಕೆಯ ನಗುನಗುತ ತೀರಿಸಿ |
ಏರುವೆನು ಕೊಡಚಾದ್ರಿ ಶಿಖರವ |
ಯಾರ ನೆರವಿರದಂತೆನುತ ಸಂಜೆಯಲಿ ಪೊರಮಡಲು ||೭೦||

ಘೋರ ತರ ಪರಿಸರದಿ ದುರಿತ ನಿ |
ವಾರಿಸುವ ಗುರುವರನು ಬರುತಿರೆ |
ಭೂರಿ ಸುಸ್ವಾಗತವ ತೋರಿದವೆಲ್ಲ ಜೀವಿಗಳು ||
ಏರಿ ಮುಂಜಾನೆಯಲಿ ದೇಗುಲ |
ದೇರಿನಲಿ ನಿಂತಿರಲು ನೇಸರ |
ನೇರಿ ತೇರಿನಲಲ್ಲಿ ಹೊಂಬಣ್ಣಗಳ ಕಿರಣದಲಿ ||೭೧||

ದೇವಿಯರ್ಚನೆ ಮಾಡಿ ಮುಂದಕೆ |
ಯಾವ ಭಯವಿರದಂತೆ ಸಾಗುತ |
ಪಾವನರ ಸುಪವಿತ್ರವೆನಿಸಿದ ಚಿತ್ರಮೂಲದೆಡೆ ||
ದೇವ ಸನ್ನಿಧಿಯೀ ತಪೋವನ |
ಭಾವಶುದ್ಧಿಯೊಳಲ್ಲಿ ಕೆಲದಿನ |
ಕಾವ ದೈವವ ಕಂಡು ತಪವಾಚರಿಸಿ ಮರಳಿದರು ||೭೨||

ಮತ್ತೆ ಸಂಪೇಕಟ್ಟೆ ಮಠದಿಂ |
ದುತ್ತರಿಸಿ ಕಾಲ್ನಡಿಗೆಯಲ್ಲಿಯೆ |
ಹೊತ್ತು ದೇವರ ಪೆಟ್ಟಿಗೆಯನಾ ಮಠದ ಗುರು ಸಹಿತ ||
ಕತ್ತಲಾಗಲು ಹತ್ತಿರದ ಮನೆ |
ಹತ್ತು ಹಲವೂರುಗಳಲುಳಿಯುತ |
ಸುತ್ತುತಲೆ ಸೊರಬದಲಿ ಗುರುವನು ಬೀಳುಗೊಳ್ಳುತಲಿ ||೭೩||

ಮುಂದೆ ಬನವಾಸಿಯಲಿ ಮಹದಾ |
ನಂದವಾಯಿತು ದೊರಕಲು ಶಿವಾ |
ನಂದ ಶಿಷ್ಯರು ಶಂಕರಾನಂದರನು ಜೊತೆಗೊಂಡು ||
ಬಂದು ಶೀಗೇಹಳ್ಳಿಯಲಿ ಗುರು |
ವಿಂದಲಾಣತಿ ಪಡೆದು ಸಾಗಿರ |
ಲಂದು ಸುದ್ದಿಯ ನೀಡಿ ಶಿವಗುರು ಕರೆಸಿ ಮತ್ತೆಡೆಗೆ ||೭೪||

ತೊರೆವೆ ದೇಹವನೆಂಬ ಶಿವಗುರು |
ಭರದಿ ಮೇಲೇಳುತ್ತ ವಿಭವದಿ |
ಬರವ ಕಾಯುತಲಿದ್ದೆ ದಾಸನೆ ನಿನ್ನ ತಾನೆನುತ ||
ತ್ವರೆಯೊಳರೆ ಸಂನ್ಯಾಸವೀವೆನು |
ಕರದಿ ದಂಡ ಕಮಂಡಲಗಳನು |
ಧರಿಸಿರೆನ್ನುತಲಿತ್ತು ಕಾಷಾಯವನು ಹರಸಿದರು ||೭೫||

ಶ್ರೀಧರರು ಸಂನ್ಯಾಸಿಯಾದರು |
ಮೋದದಲಿ ಗುರು ಪದದಿ ಮಣಿದರು |
ಸಾಧಿಸುವೆನೆಂದೆನುತ ಗೈದರು ಹಠದಿ ವಿಧಿಗಳನು ||
ಗೋದಿ ಗೋಮೂತ್ರದಲಿ ಹಿಟ್ಟನು |
ನಾದಿ ಮಾಡಿದ ರೊಟ್ಟಿಯನು ತುಸು |
ಭೇದವೆಣಿಸದೆ ಸೊಪ್ಪ ತಿನುತಿರೆ ನಾಲ್ಕು ಮಾಸದಲಿ ||೭೬||

ರಾಮದಾಸರ ಕಾಣುವಾಸೆಯೊ |
ಳಾ ಮಹಾತ್ಮರ ಸನ್ನಿಧಿಗೆ ಬಲು |
ನೇಮದಿಂದಲೆ ಹೊರಟು ವಾಹನವೇರಿ ಸಾಗಿದರು ||
ಕ್ಷೇಮದಿಂದಲಿ ದಾಸನವಮಿಗೆ |
ರಾಮ ಜಪ ಮಾಡುತಲಿ ಸಜ್ಜನ |
ಧಾಮವನು ಸೇರಿದರು ಮಾತೆಯ ಮಡಿಲ ಕೂಸಂತೆ ||೭೭||

ಹೊಳೆವ ಕಾಂತಿಯ ಮೊಗದ ತೇಜದಿ |
ಸೆಳೆದು ಸಜ್ಜನಗಡದಿ ಮಾತಿನ |
ಹೊಳಹಿನಲಿ ಬೆರಗಾದರೆಲ್ಲರು ದಿವ್ಯತೆಯ ಕಂಡು ||
ಇಳೆಯ ಪಾಲಿಸೆ ಬಂದ ದತ್ತನು |
ಕಳೆವ ಜನ ಸಂಕಷ್ಟವೆನುತಲಿ |
ತಿಳಿದು ಪಾದವ ತೊಳೆದು ಪೂಜಿಸಲಂದು ಪುರದ ಜನ ||೭೮||

ರಚನೆಯಲಿ ತೊಡಗಿದರು ಶಾಸ್ತ್ರದ |
ಖಚಿತ ಸುಸ್ಪಷ್ಟತೆಯ ವಿಧಿಗಳ |
ಉಚಿತವೆಂಬೀ ಕಾಲಧರ್ಮಕೆ ಹೊಂದಿಕೊಳುವಂತೆ ||
ರಚಿಸಿ ಸಂಸ್ಕೃತದಲಿ ಮರಾಠಿಯ |
ರುಚಿರ ಭಾಷಾ ಛಂದ ಬಂಧದ |
ನಿಚಯ ಸಾಹಿತ್ಯಗಳ ನೀಡಿದರಂದು ಮನುಕುಲಕೆ ||೭೯||

ಶೀಗೆಹಳ್ಳಿಯ ಸುದ್ದಿ ಶಿವಗುರು |
ನೀಗಿದರು ತನುವೆಂದು ಕೇಳುತ |
ಚಾಗ ಯೋಗದ ಗುರುವಿನಡಿ ಸಂಸ್ಮರಣೆ ಮಾಡಿದರು ||
ಬೇಗ ಚಿತ್ತೈಸುವೆನು ತಾನೆನು |
ತಾಗ ಯಾಣದ ಯಾನಕೆನ್ನುತ |
ಸಾಗಿದರು ತಂಡೋಪತಂಡದ ಭಕ್ತರೊಡಗೊಂಡು ||೮೦||

ಯಾಣಕೆನ್ನುತ ಬರುವ ಗುರುವನು |
ಕಾಣಲಿಕೆ ಜನ ಸಾಗರವೆ ದಿಟ |
ಕಾನನದ ತುಂಬೆಲ್ಲ ಕಿಕ್ಕಿರಿದಿರ್ದ ಜನರೊಡನೆ ||
ಧ್ಯಾನ ಯೋಗಾದಿಗಳ ಜೊತೆ ಜನ |
ಗಾನ ಸೌರಭ ಸವಿದು ಜನ ದು |
ಮ್ಮಾನಗಳ ಪರಿಹರಿಸುತಿರ್ದರು ದೃಷ್ಟಿ ಮಾತ್ರದಲೆ ||೮೧||

ಶೀಗೆಹಳ್ಳಿಗೆ ಬಂದರಾಗಲೆ |
ಬಾಗಿ ಗುರುವಂದನೆಯ ಸಲ್ಲಿಸಿ |
ಬೇಗ ಪೂರೈಸಿದರು ಗುರುವಾಶಿಸಿದ ಕಾರ್ಯಗಳ ||
ಯೋಗಿವರ್ಯರ ನೆನೆದು ಭಕ್ತಿಯ |
ಲೀಗ ಸಂನ್ಯಾಸದಲಿ ಪೂರ್ಣತೆ |
ಗಾಗಿ ದೀಕ್ಷೆಯ ಪಡೆವೆನೆನ್ನುತ ಗೈದು ವಿಧಿಗಳನು ||೮೨||

ಶ್ರೀಧರರು ಭಗವಾನರೆನಿಸುತ |
ಸಾಧಿಸಲು ಸಂನ್ಯಾಸ ಪದವಿಯ |
ಬೋಧಿಸಿದರೆಲ್ಲರಿಗೆ ಕರುಣೆಯ ದಿವ್ಯ ವಚನಗಳ ||
ಸಾಧ್ಯವೆಲ್ಲರಿಗೆನುತಲಭಯವ |
ಬಾಧೆ ರೋದನವಿರದೆ ಬಾಳುವ |
ಹಾದಿಯನು ದೇವತೆಗಳೆಲ್ಲರು ತೋರಲೆಂದೆನುತ ||೮೩||

ಸರ್ವರೊಳಿತನು ಹರಸಿ ಮುಂದಕೆ |
ಧರ್ಮಕರ್ತವ್ಯಗಳ ಬಿಡದಲೆ |
ಉರ್ವಿ ಸುಕ್ಷೇಮವನು ಬಯಸುತ ತೆರಳಿ ತಿರುಪತಿಗೆ  ||
ಪರ್ಯಟನೆ ರಾಮೇಶ್ವರದ ಕಡೆ |
ಪೆರ್ಮೆ ಸೇತುವೆ ಕಂಡು ಪೂಜೆಯ |
ನಿರ್ವಹಿಸುತಲ್ಲಿಂದ ತಂಜಾವೂರು ಸಂಚರಣೆ ||೮೪||

ಬರುತ ತೆಂಕಣದಲ್ಲಿ ಭಕ್ತರ |
ಕರೆಯ ಮನ್ನಿಸುತವರ ಸಲಹುತ |
ಭರದ ಸಂಚಾರದಲಿ ನೇಮವ ಬಿಡದೆ ಮುಂಬರಿದು ||
ತೆರಳುವಾಸೆಯು ಬದರಿ ಧಾಮಕೆ |
ಗುರುವಿನಾಣತಿಗಾಗಿ ಸಜ್ಜನ |
ಗಿರಿಗೆ ಧಾವಿಸಿ ದತ್ತ ಪಾದುಕೆಗಳನು ನೆಲೆಗೊಳಿಸೆ ||೮೫||

ಒದಗಲನುಮತಿ ಶಿಷ್ಯರೊಂದಿಗೆ |
ಬದರಿಕಾಶ್ರಮದತ್ತ ಹೊರಟರು |
ಮುದದಿ ಹೃಷಿಕೇಶದಲಿ ಕಾಲ್ನಡಿಗೆಯಲಿ ಸಾಗಿದರು ||
ಬದಿಯಲಿಹ ಸಾಧುಗಳ ಜೊತೆಯಲಿ |
ನದಿಯು ಗಂಗಾ ಸ್ನಾನ ಗೈಯುತ |
ಬದರಿನಾಥನ ಸನ್ನಿಧಿಗೆ ಬಂದಲ್ಲಿ ಸೇರಿದರು ||೮೬||

ಅಲ್ಲೆ ಚಾತುರ್ಮಾಸ್ಯವಾಯಿತು |
ಚೆಲ್ವ ನರಪರ್ವತದ ಗುಹೆಯಲಿ |
ಎಲ್ಲ ಸಾಧುಗಳಿಂಗೆ ಸಂತರ್ಪಣೆಯು ದಿನದಿನವೂ ||
ಬಲ್ಲಿದರು ಸಲ್ಲಿಸಿದ ಕಾಣಿಕೆ |
ಯಲ್ಲಿ ಕಂಬಳಿ ಸೀರೆ ಪಂಚೆಯ |
ನೆಲ್ಲ ಸಾಧುಗಳಿಂಗೆ ದೀನರಿಗೆನುತ ಹಂಚಿದರು ||೮೭||

ನಡೆದು ವೇದವ್ಯಾಸ ಗುಹೆಯಲಿ |
ಪಡೆದು ದಿವ್ಯಾನುಗ್ರಹವ ಪೊಡ |
ಮಡುತ ಗಂಗೆಯ ಸಂಗಮದ ತಾಣದಲಿ ಮೀಯುತಲಿ ||
ಕಡುಹಠದಿ ಮುಂದೈದು ಪಶ್ಚಿಮ |
ದೆಡೆಯ ಕಾಥೇವಾಡಿ ಗಿರಿನಾರ್ |
ಗುಡಿಯ ದತ್ತನ ಪಾದುಕೆಯ ದರ್ಶನದ ಬಯಕೆಯಲಿ ||೮೮||

ಜಗದ ಗುರು ದತ್ತನನು ಕಂಡರು |
ನಗೆಯ ಗೆಲುವಿಂದೆದ್ದು ಹೊರಡುತ |
ಹೊಗಲು ರಾಣೇಶ್ವರದ ರಾಜರ ಗುರುವಿನಾ ಮಠಕೆ ||
ಬಗೆಯ ಚಾತುರ್ಮಾಸ್ಯದವಧಿಯ |
ಮುಗಿಸಿರಿಲ್ಲೆಂದವರು ಕೋರಲು |
ಸೊಗಸಿನೊಳಗೊಪ್ಪುತಲೆ ಗುರುವರ ಕುಳಿತರಾ ಮಠದಿ ||೮೯||

ಫಲಗಳೊಂದಿಗೆ ಹಾಲನಲ್ಲದೆ |
ಬಳಸರಿನ್ನೇನನ್ನು ಭಿಕ್ಷಕೆ |
ಅಳುಕಿರಲು ಜನ ಗುರುವಿಗೀಯಲು ಹಾಲು ಸಿಕ್ಕದಿರೆ ||
ಬಳಿಯ ಬರಡಾಕಳನೆ ಹಿಂಡಿಸಿ |
ಬಳಕೆ ಮಾಡಿದರಂದು ವಿಸ್ಮಯ |
ಗೆಲಲು ಭಾರತ ದೇಶವೇ ಸ್ವಾತಂತ್ರ್ಯ ಸಂಭ್ರಮದಿ ||೯೦||

(ಮುಂದುವರಿಯುವುದು)